ಜನವಾಹಿನಿ NEWS ಸಿದ್ದಾಪುರ : ವೀರಾಜಪೇಟೆ ತಾಲೂಕು ವ್ಯಾಪ್ತಿಯ ಮಾಲ್ದಾರೆ ಸಮೀಪದ ಮತ್ತೂರು ಬಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಕೆಲ ದುಷ್ಕರ್ಮಿಗಳು ಸೇರಿಕೊಂಡು ಅನಧಿಕೃತವಾಗಿ ಸಮಾಧಿ (ಗೋರಿ) ನಿರ್ಮಾಣ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೃತ್ಯ ಎಸಗಿರುವ ವಿಚಾರ ಬೆಳಕಿಗೆ ಬಂದಿದ್ದು, ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಭಟನೆಗೆ ಕರೆ : ದೇವಾಲಯ ಆವರಣದಲ್ಲಿ ಸಮಾಧಿ ನಿರ್ಮಾಣ ಮಾಡುವ ಮುಖಾಂತರ ಹಿಂದೂಗಳ ಭಾವನೆಗಳಿಗೆ ಹಾಗೂ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದ್ದು ಕೃತ್ಯ ಎಸಗಿರುವ ಆರೋಪಿಗಳನ್ನು ಕೂಡಲೇ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರೋ ಹಿಂದೂ ಜಾಗರಣ ವೇದಿಕೆ, ಹಿಂದೂ ಸುರಕ್ಷಾ ಸಮಿತಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಸೋಮವಾರ 27 ರಂದು ಪ್ರತಿಭಟನೆಗೆ ಕರೆ ನೀಡಿದ್ದು, ತಕ್ಷಣವೇ ಸಮಾಧಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿವೆ.
ಪ್ರತಿಭಟನೆಯಲ್ಲಿ ಕೊಡಗು ಹಾಗೂ ಪಿರಿಯಾಪಟ್ಟಣ ಸುತ್ತಮುತ್ತಲಿನ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಈ ಸೂಕ್ಷ್ಮ ವಿಷಯದಿಂದಾಗಿ ಕೊಡಗಿನ ಪರಿಸರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಇದರಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಿದೆ.








