ಜನವಾಹಿನಿ NEWS ಸಿದ್ದಾಪುರ : ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಅಪ್ರಾಪ್ತ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ಸಮೀಪದ ಹೊಲಮಾಳದಲ್ಲಿ ನಡೆದಿದೆ.
ಉಮ್ಮರ್ ಎಂಬುವವರ ಪುತ್ರ ನಿಯಾನ್ (16) ಎಂಬಾತನೇ ಸ್ಕೂಟರ್ ನಿಂದ ಬಿದ್ದು ಸಾವನ್ನಪ್ಪಿರುವ ಬಾಲಕ.
ಮನೆಯಿಂದ ಸ್ಕೂಟರ್ ನಲ್ಲಿ ಮದರಸಾಗೆ (ಪಳ್ಳಿಗೆ) ತೆರಳಿದ್ದ ಬಾಲಕ ಮನೆಗೆ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸ್ಕೂಟರ್ನಿಂದ ಬಿದ್ದು ಅಪ್ರಾಪ್ತ ಬಾಲಕ ಮೃತಪಟ್ಟಿರುವ ದುರಂತ ಘಟನೆಯು ತೀವ್ರ ಆಘಾತ ಮತ್ತು ಬೇಸರವನ್ನು ಉಂಟುಮಾಡುವಂಥದ್ದಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದು ಕಾನೂನುಬಾಹಿರ ಮಾತ್ರವಲ್ಲದೆ, ಅವರ ಮತ್ತು ರಸ್ತೆಯಲ್ಲಿ ಸಂಚರಿಸುವ ಇತರರ ಜೀವಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.ಈ ದುರ್ಘಟನೆಯು ಅಪ್ರಾಪ್ತರಿಗೆ ವಾಹನಗಳನ್ನು ನೀಡಬಾರದು ಎಂಬ ನಿಯಮದ ಮಹತ್ವವನ್ನು ಮತ್ತು ಪೋಷಕರ ಜವಾಬ್ದಾರಿಯನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರು ಅಥವಾ ವಾಹನದ ಮಾಲೀಕರಿಗೆ ಭಾರಿ ದಂಡ ಮತ್ತು 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರ ಮೇಲೆಯೇ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ಮಕ್ಕಳಿಗೆ ವಾಹನ ನೀಡಬೇಡಿ : ಮಕ್ಕಳು ಎಷ್ಟು ಒತ್ತಾಯಿಸಿದರೂ ಸೂಕ್ತ ವಯಸ್ಸು ಮತ್ತು ಲೈಸೆನ್ಸ್ ಬರುವವರೆಗೆ ಯಾವುದೇ ಕಾರಣಕ್ಕೂ ಅವರಿಗೆ ಗೇರ್ ಅಥವಾ ಗೇರ್ ರಹಿತ ವಾಹನಗಳನ್ನು ನೀಡಬೇಡಿ.







