ಜನವಾಹಿನಿ NEWS ಮಡಿಕೇರಿ : ಸಿದ್ದಾಪುರದಿಂದ ಪಳ್ಳಕೆರೆ, ಗುಹ್ಯ ಹಾಗೂ ಒಂಟಿಯಂಗಡಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಹಲವಾರು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಸುತ್ತಮುತ್ತಲ ಗ್ರಾಮಸ್ಥರು ರಸ್ತೆಯ ಹೊಂಡಗಳಲ್ಲಿ ಕಾಫಿ, ಅಡಿಕೆ ಮತ್ತು ಬಾಳೆ ಗಿಡ ನೆಟ್ಟು ವಿಶಿಷ್ಟ ಪ್ರತಿಭಟನೆ ನಡೆಸಿದರು.
ಮಳೆಗಾಲದಲ್ಲಿ ನರಕ ಯಾತನೆ
ಮಳೆಗಾಲ ಬಂದ್ರೆ ಈ ಭಾಗದ ಜನರ ಪಾಡು ಹೇಳತೀರದು. ಇಡೀ ರಸ್ತೆ ಕೆಸರು ಗದ್ದೆಯಾಗಿ ಬದಲಾಗುತ್ತದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಪ್ರತಿದಿನ ಕೆಸರಿನಲ್ಲಿ ಒದ್ದಾಡುವಂತಾಗಿದೆ. ವಾಹನಗಳು ಹಾದು ಹೋಗುವಾಗ ಸಿಡಿಯುವ ಕೆಸರು ಬಟ್ಟೆಗೆ ಬಿದ್ದು ಕೊಳಕಾಗುವ ಪ್ರಸಂಗಗಳು ನಿತ್ಯವೂ ನಡೆಯುತ್ತಿವೆ.
“ತೆರಿಗೆ ಕಟ್ಟೋಣ, ಮತ ಹಾಕೋಣ. ಆದ್ರೆ ಮೂಲಭೂತ ಸೌಕರ್ಯ ಸಿಗೋದಿಲ್ಲ. ಇದಕ್ಕಿಂತ ನಾಚಿಕೆಗೇಡು ಬೇರೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು “ರಸ್ತೆ ರಿಪೇರಿ ಮಾಡೋದಕ್ಕಿಂತ ಇಲ್ಲಿ ಕೃಷಿ ಮಾಡೋದೇ ಒಳ್ಳೆಯದು” ಎಂದು ಘೋಷಣೆ ಕೂಗಿದರು.
ಕೂಡಲೇ ರಸ್ತೆ ದುರಸ್ತಿ ಮಾಡದಿದ್ದರೆ ಇನ್ನಷ್ಟು ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಭಾಗದ ಜನರ ದೈನಂದಿನ ಓಡಾಟ, ಶಾಲಾ ಮಕ್ಕಳು, ರೈತರ ಉತ್ಪನ್ನ ಸಾಗಾಣಿಕೆಗೆ ಈ ರಸ್ತೆಯೇ ಆಧಾರ. ಆದರೆ ಮಳೆಗಾಲದಲ್ಲಿ ಇಡೀ ರಸ್ತೆ ಕೆಸರುಮಯವಾಗಿ ಸಂಪೂರ್ಣ ಸಂಚಾರಕ್ಕೆ ಅಡಚಣೆಯಾಗಿದೆ.
ಪ್ರತಿಭಟನೆಯಲ್ಲಿ ಗ್ರಾಮದ ಪ್ರಮುಖರಾದ ಉದಯ ಕುಮಾರ್, ಪ್ರಕಾಶ್, ಗಿರೀಶ್, ರಾಜನ್ ಸೇರಿದಂತೆ ಮಹಿಳೆಯರು ಮತ್ತಿತರರು ಪಾಲ್ಗೊಂಡಿದ್ದರು.







