ಜನವಾಹಿನಿ ನ್ಯೂಸ್ ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿಗಳಲ್ಲಿ ಒಂದಾದ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಸಾಹಿತಿ ಶ್ರೀಮತಿ ಉಳುವಂಗಡ ಕಾವೇರಿ ಉದಯ್ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2026-27ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ಜಿಲ್ಲೆಯ ಮಹಿಳಾ ಲೇಖಕಿಯರ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಬಂದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂವರು ಸಾಹಿತಿಗಳು ಪರಿಶೀಲಿಸಿ ನೀಡಿದ ಅಂಕಗಳ ಆಧಾರದ ಮೇಲೆ ಕಾವೇರಿ ಉದಯ್ ಅವರು ಆಯ್ಕೆಯಾಗಿದ್ದಾರೆ.
ಸಾಧಕಿಯ ಪರಿಚಯ : ಟಿ.ಶೆಟ್ಟಿಗೇರಿಯ ಚಂಗುಲಂಡ ಸಿ.ಮಾದಪ್ಪ-ಸರಸ್ವತಿ ದಂಪತಿಯ ಪುತ್ರಿಯಾಗಿ 18-05-1969ರಂದು ಜನಿಸಿದ ಇವರು, ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ವಗರೆ ನಿವಾಸಿ ಉಳುವಂಗಡ ಯು.ಉದಯ ಅವರನ್ನು ವಿವಾಹವಾದರು.
ಬಹುಭಾಷಾ ಸಾಹಿತಿ, ಕವಯಿತ್ರಿ, ಹವ್ಯಾಸಿ ರಂಗಕಲಾವಿದೆ ಮತ್ತು ಚಿತ್ರಕಲಾವಿದೆಯಾಗಿರುವ ಇವರು ಕನ್ನಡ, ಕೊಡವ, ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಕಥೆ, ಕವನ, ಕಾದಂಬರಿ, ಮುಕ್ತಕ, ವಚನ, ಜೀವನ ಚರಿತ್ರೆ, ಭಕ್ತಿ ಪ್ರಧಾನ, ಲಲಿತ ಪ್ರಬಂಧ, ನಾಟಕ ಸೇರಿ ಒಟ್ಟು 36 ಕೃತಿಗಳನ್ನು ರಚಿಸಿದ್ದಾರೆ.
ಇವರ ಕಾದಂಬರಿಯೊಂದು ಕೊಡವ ಸಿನಿಮಾ ಆಗಿದ್ದು, ನಾಲ್ಕು ಸಣ್ಣ ಕಥೆಗಳು ಕಿರುಚಿತ್ರಗಳಾಗಿವೆ. ಇವರು ಬರೆದ ಹಾಡುಗಳು ಮಡಿಕೇರಿ ಆಕಾಶವಾಣಿಯ ಸುಪ್ರಭಾತದಲ್ಲಿ ಪ್ರಸಾರವಾಗುತ್ತಿವೆ.
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಶ್ರೀಮಂಗಲ ಹೋಬಳಿ ಅಧ್ಯಕ್ಷೆ, ಸಿರಿಗನ್ನಡ ವೇದಿಕೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ, ಗುರುಕುಲ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷೆ ಮತ್ತು ಕರ್ನಾಟಕ ಲೇಖಕಿಯರ ಸಂಘದ ಕೊಡಗು ಶಾಖೆಯ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು : ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಬಾಲ ವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಗುರುಕುಲ ಶಿರೋಮಣಿ ಪ್ರಶಸ್ತಿ, ಕೊಡವ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ಸೇರಿದಂತೆ 11 ಪ್ರಮುಖ ಪ್ರಶಸ್ತಿಗಳು ಹಾಗೂ 26 ಸಂಘ-ಸಂಸ್ಥೆಗಳಿಂದ ಸನ್ಮಾನ.
ಈ ಹಿಂದೆ ಪ್ರಥಮ ವಿಜಯ ವಿಷ್ಣು ಭಟ್ ಪ್ರಶಸ್ತಿಯನ್ನು ಸುಮಿತಾ ಅಮೃತ್ ರಾಜ್ ಮತ್ತು ದ್ವಿತೀಯ ಪ್ರಶಸ್ತಿಯನ್ನು ಪ್ರತಿಭಾ ಹರೀಶ್ ರೈ ಅವರು ಪಡೆದಿದ್ದರು. ಈ ಬಾರಿ ತೃತೀಯ ಪ್ರಶಸ್ತಿಯನ್ನು ಕಾವೇರಿ ಉದಯ್ ಅವರು ಪಡೆದುಕೊಂಡಿದ್ದಾರೆ.







