ಜನವಾಹಿನಿ ನ್ಯೂಸ್ ಮಡಿಕೇರಿ : ಬೆಲೆ ಏರಿಕೆ ವಿರುದ್ಧ ಕೊಡಗು ಜಿಲ್ಲಾ ಬಿಜೆಪಿ ಘಟಕದ ಮುಖಂಡರು, ಕಾರ್ಯಕರ್ತರು ಇಲ್ಲಿನ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರವಿ ಕಾಳಪ್ಪ, ‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದು ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಹೀಗಾಗಿ, ರಾಜ್ಯಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯಸರ್ಕಾರ ನಿತ್ಯವೂ ಬಳಸುವ ಹಾಲಿನ ದರ ಹೆಚ್ಚಿಸುವ ಮೂಲಕ ಬಡವರ ಮೇಲೆ ಗದಾಪ್ರಹಾರ ನಡೆಸಿದೆ’ ಎಂದು ಟೀಕಿಸಿದರು.
‘ರೈತರಿಗೆ ಬೆಂಬಲ ಬೆಲೆ ನೀಡುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಗ್ರಾಹಕರ ಮೇಲೆ ನೇರವಾಗಿ ಹೊರೆ ಹಾಕಿ, ಅವರಿಂದ ಸಂಗ್ರಹವಾಗುವ ಹಣವನ್ನು ರೈತರಿಗೆ ಬೆಂಬಲ ಬೆಲೆಯಾಗಿ ನೀಡುವುದಕ್ಕೆ ನಮ್ಮ ವಿರೋಧವಿದೆ. ಸರ್ಕಾರವು ರೈತರಿಗೆ ನೀಡುವ ಬೆಂಬಲ ಬೆಲೆಯ ವೆಚ್ಚವನ್ನು ತಾನೇ ಭರಿಸಬೇಕು. ಗ್ರಾಹಕರಿಗೆ ಹೊರೆಯಾಗಿರುವ ಹಾಲಿನ ಬೆಲೆ ಏರಿಕೆಯನ್ನು ತಕ್ಷಣ ಹಿಂದೆಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.
ನಿತ್ಯವೂ ಎಲ್ಲರೂ ಬಳಸುವ ಹಾಲಿನ ದರವನ್ನು ಒಂದೆರಡು ರೂಪಾಯಿ ಹೆಚ್ಚಿಸಿದ್ದರೆ ಸಾಕಿತ್ತು. ಆದರೆ, ಮನಬಂದಂತೆ ₹ 14ರವರೆಗೂ ಲೀಟರ್ಗೆ ಹೆಚ್ಚಿಸಿರುವುದು ತೀರಾ ಹೊರೆಯಾಗಿದೆ. ಗ್ರಾಹಕರ ಜೇಬಿಗೆ ಸರ್ಕಾರ ನೇರವಾಗಿಯೇ ಕತ್ತರಿ ಹಾಕಿದೆ ಎಂದು ಕಿಡಿಕಾರಿದರು.
ಸರ್ಕಾರ ದಿವಾಳಿಯಾಗಿರುವುದರಿಂದಲೇ ರೈತರಿಗೆ ಬೆಂಬಲ ಬೆಲೆ ನೀಡಲೂ ಸಾಧ್ಯವಾಗದ ಸ್ಥಿತಿಯಲ್ಲಿದೆ. ಅದಕ್ಕಾಗಿಯೇ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆಯನ್ನು ಹೇರಿದೆ ಎಂದು ಆರೋಪಿಸಿದರು.
ಆರ್ಥಿಕವಾಗಿ ದಿವಾಳಿಯಾಗಿರುವ ಕರ್ನಾಟಕ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕೆಂಬ ಬೇಡಿಕೆಯನ್ನು ಪ್ರತಿಭಟನೆಯ ಮೂಲಕ ಮುಂದಿಡಲಾಗುತ್ತಿದೆ ಎಂದು ಹೇಳಿದರು.
ಕೊಡಗಿನ ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರು ಬೆಂಗಳೂರಿನಲ್ಲಿ ನಾಟಕ ಪ್ರದರ್ಶನಕ್ಕೆ ಮುಂದಾದ ವೇಳೆ ಅವರಿಗೆ ಮಸಿ ಬಳಿದು ಅವಮಾನ ಮಾಡಲಾಗಿದೆ. ಇದು ಸರಿಯಲ್ಲ ಎಂದು ಖಂಡಿಸಿದರು.
ಪ್ರತಿಭಟನೆಯ ಬಳಿಕ ಜಿಲ್ಲಾ ಬಿಜೆಪಿ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಜಯಲಕ್ಷ್ಮಿ ರಾಯಕೋಡ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಮುಖಂಡರಾದ ಶಾಂತೆಯಂಡ ರವಿ ಕುಶಾಲಪ್ಪ, ಪಿ. ಕಲಾವತಿ, ಯಮುನಾ ಚಂಗಪ್ಪ, ಎಡಿಕೇರಿ ಪ್ರಸನ್ನ, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಬಿ.ಕೆ. ಅರುಣ್ ಕುಮಾರ್, ಪಾಂಡೀರ ಪೂಣಚ್ಚ, ಕನ್ನಂಡ ಸಂಪತ್, ಪಿ.ಎಂ. ರವಿ, ಬಿ.ಕೆ. ಜಗದೀಶ್, ಡೀನ್ ಬೋಪಣ್ಣ, ಸಜಿಲ್ ಕೃಷ್ಣನ್, ಬಿ.ಪಿ. ಡಿಶು, ಸುವಿನ್ ಗಣಪತಿ, ಜಿ.ಎಂ. ಸತೀಶ್ ಪೈ, ಉಮಾ ಪ್ರಭು, ಮನು ಮಹೇಶ್, ಕುಟ್ಟಂಡ ಅಜಿತ್, ಸಬಿತಾ, ಮಂಜುಳ ಭಾಗವಹಿಸಿದ್ದರು.







