ಜನವಾಹಿನಿ ನ್ಯೂಸ್ ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಕೀಲರಾದ ಶ್ರೀ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಶ್ರೀಮತಿ ಜಿ.ಕೆ. ದೇವಕಿ ಪೆಮ್ಮಯ್ಯ ಅವರು ಸ್ಥಾಪಿಸಿರುವ ಸಾಹಿತ್ಯ ಪ್ರಶಸ್ತಿಯ ಪ್ರಥಮ ವರ್ಷದ ಪ್ರಶಸ್ತಿಗೆ ಹಿರಿಯ ಸಾಹಿತಿ *ಡಾ. ಕೋರನ ಸರಸ್ವತಿ* ಅವರು ಆಯ್ಕೆಯಾಗಿದ್ದಾರೆ.
ಡಾ. ಕೋರನ ಸರಸ್ವತಿ ಜಿಲ್ಲೆಯ ಹಿರಿಯ ಸಾಹಿತಿ, ಕವಯತ್ರಿ ಹಾಗೂ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು. ಕನ್ನಡ ಮತ್ತು ಅರೆಭಾಷೆಯಲ್ಲಿ ಏಳು ಕೃತಿಗಳನ್ನು ಪ್ರಕಟಿಸಿದ್ದು, ನೂರಾರು ಲೇಖನಗಳನ್ನು ಬರೆದಿದ್ದಾರೆ.
ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಅಧ್ಯಕ್ಷತೆ, ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದಾರೆ. ಆಕಾಶವಾಣಿಯಲ್ಲಿ 58 ಚಿಂತನ ಕಾರ್ಯಕ್ರಮಗಳು, ದೂರದರ್ಶನದಲ್ಲಿ ವಿಶೇಷ ಸಾಹಿತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವಾರು ಸ್ಪರ್ಧೆಗಳಿಗೆ ತೀರ್ಪುಗಾರರಾಗಿ, ಹಲವಾರು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಮಿತಿಗಳ ಸದಸ್ಯರಾಗಿ, ಕಾರ್ಯದರ್ಶಿಗಳಾಗಿ, ಹಲವಾರು ಅಧ್ಯಯನ ಮಂಡಳಿಗಳ ಕನ್ನಡ ಪಠ್ಯಪುಸ್ತಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೊಡಗಿನ ಪ್ರತಿಷ್ಠಿತ ಗೌರಮ್ಮ ದತ್ತಿ ಪ್ರಶಸ್ತಿ ಸೇರಿದಂತೆ ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಶಿಕ್ಷಕ ಪುರಸ್ಕಾರ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಇವರಿಗೆ ಲಭಿಸಿದೆ.
ಪ್ರಶಸ್ತಿ ಪುರಸ್ಕೃತರಾದ ಡಾ. ಕೋರನ ಸರಸ್ವತಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆ ಸಲ್ಲಿಸಿದೆ ಎಂದು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







