Breaking News :

ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷರ ನೇಮಕ : ಕುಮಾರಸ್ವಾಮಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ತಾಲ್ಲೂಕು ಅಧ್ಯಕ್ಷರ ನಿಯೋಗ

 


ಜನವಾಹಿನಿ NEWS ಮಡಿಕೇರಿ : ಕಳೆದ ಸುಮಾರು ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರ ನೇಮಕವಾಗದ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೊಡಗಿನ ವಿವಿಧ ತಾಲ್ಲೂಕುಗಳ ಜೆಡಿಎಸ್ ಅಧ್ಯಕ್ಷರ ನಿಯೋಗವು ಇಂದು ಬೆಂಗಳೂರಿನ ಜೆಪಿ ಭವನದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ,ಜೆಡಿಎಸ್ ರಾಜ್ಯಾ ಧ್ಯಕ್ಷ,ಕೇಂದ್ರ ಸಚಿವ ಎಚ್. ಡಿ. ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿ, ಜಿಲ್ಲೆಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವಂತೆ ಮನವಿ ಸಲ್ಲಿಸಿತು.

ನಿಯೋಗದ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ ಅವರು ಕೂಡಲೇ ಪಕ್ಷದ ರಾಜ್ಯ ಮುಖಂಡ ಹಾಗೂ ಮಾಜಿ ಉಸ್ತುವಾರಿ ಸಚಿವ ಸಾ. ರ. ಮಹೇಶ್ ಅವರಿಗೆ ದೂರವಾಣಿ ಕರೆ ಮಾಡಿ, ಕೊಡಗು ಜಿಲ್ಲಾ ಘಟಕದ ವಿಚಾರವಾಗಿ ತುರ್ತು ಸಭೆ ನಡೆಸುವಂತೆ ಸೂಚಿಸಿದರು.

ಅದರಂತೆ, ಜುಲೈ 10, 2026ರಂದು ಮಧ್ಯಾಹ್ನ 12.30ಕ್ಕೆ ಪಕ್ಷದ ಪ್ರಮುಖ ಮುಖಂಡರ ಸಭೆ ನಡೆಯಲಿದ್ದು, ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರ ನೇಮಕ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಜಿಲ್ಲಾಧ್ಯಕ್ಷರ ಹುದ್ದೆ ಖಾಲಿ ಇರುವುದರಿಂದ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದ್ದು, ಶೀಘ್ರ ನೇಮಕ ಮಾಡುವಂತೆ ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

ಈ ನಿಯೋಗದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ರವಿ ಕಿರಣ್ ಶೆಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಕೆ. ಶಿವದಾಸ್ ಹಾಗೂ ಕುಶಾಲನಗರ ತಾಲ್ಲೂಕು ಅಧ್ಯಕ್ಷ ಕೋಟಿ ರಾಮಣ್ಣ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News