Breaking News :

ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಆಗ್ರಹಿಸಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ 

 


ಜನವಾಹಿನಿ News ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ಸುತ್ತಮುತ್ತಲಿರುವ ನಿರಾಶ್ರಿತರು ಹಾಗೂ ಲೈನ್ ಮನೆಗಳಲ್ಲಿರುವ ನಿವೇಶನ ರಹಿತರಿಗೆ ಶಾಶ್ವತ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು.

ಮಾರುಕಟ್ಟೆ ಬಳಿಯಿರುವ ಪಕ್ಷದ ಕಚೇರಿಯಿಂದ ಬಸ್ ನಿಲ್ದಾಣದ ಮೂಲಕ ಪಂಚಾಯತಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಗ್ರಾಮ ಪಂಚಾಯತಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ವಿಫಲವಾಗಿರುವ ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯಿತಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಪಕ್ಷದ ಸಂಚಾಲನ ಸಮಿತಿ ಸದಸ್ಯ ಅನಿಲ್ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಸರಾಂತ ಖಾಸಗಿ ಕಂಪನಿಗಳ ಒಡೆತನದ ಕಾಫಿ ಸಂಸ್ಥೆಗಳ ಹಾಗೂ ವಿವಿಧ ತೋಟಗಳ ಭೂ ಮಾಲೀಕರ ಬಳಿ ಬೇಕಾದಷ್ಟು ಸರಕಾರಿ ಭೂಮಿ ಇದ್ದು, ಇದನ್ನು ತೆರವುಗೊಳಿಸಬೇಕಾದ ಗ್ರಾಮ ಪಂಚಾಯಿತಿ ಕೈಕಟ್ಟಿ ಕುಳಿತಿದೆ. ಗ್ರಾಮ ಪಂಚಾಯಿತಿ ಸದಸ್ಯರು ಕಮಿಷನ್‌ ದಂಧೆಯಲ್ಲಿತೊಡಗಿದ್ದಾರೆ ಎಂದು ಆರೋಪಿಸಿದ ಅವರು, ಗ್ರಾಮ ಪಂಚಾಯಿತಿಯವರು ಭೂ ಮಾಲೀಕರ ಪರವಾಗಿದ್ದಾರೆ. ನಿವೇಶನ ರಹಿತರು ನಿವೇಶನಕ್ಕಾಗಿ ಹಲವು ಬಾರಿ ಪಂಚಾಯತಿ ಮಂಡಳಿಗೆ ಮನವಿ ಸಲ್ಲಿಸಿದರು ಈ ವರೆಗೂ ನಿವೇಶನ ಹಂಚಲು ಕ್ರಮ ಕೈಗೊಳ್ಳುವಲ್ಲಿ ಸ್ಥಳೀಯ ಪಂಚಾಯತಿ ವಿಫಲವಾಗಿದ್ದು, ಕೂಡಲೇ ಸರಕಾರಿ ಜಾಗವನ್ನು ಗುರುತಿಸಿ ಅಥವಾ ಖಾಸಗಿ ಜಾಗವನ್ನು ಖರೀದಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಿವೇಶನ ರಹಿತರನ್ನು ಒಗ್ಗೂಡಿಸಿ ಗ್ರಾಮ ಪಂಚಾಯತಿ ಎದುರು ಆಹೋರಾತ್ರಿ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.

ಸಮಿತಿ ಕಾರ್ಯದರ್ಶಿ ಎನ್‌.ಡಿ.ಕುಟ್ಟಪ್ಪ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೂಡುಗದ್ದೆ ಸೇರಿದಂತೆ ವಿವಿಧ ಕಡೆಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ಕುರಿತು ಪಂಚಾಯತಿ ಬಳಿ ಸಾರ್ವಜನಿಕರು ಅಳಲು ತೋಡಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಪಂಚಾಯತಿಯಿಂದ ನೇಮಕ ಮಾಡಿರುವ ಸಿಬ್ಬಂದಿಗಳು ಜನರು ಕೆಲಸಕ್ಕೆ ತೆರಳಿದ್ದ ಸಂದರ್ಭ, ಮಧ್ಯ ರಾತ್ರಿ ಹೀಗೆ ಬೇಕಾಬಿಟ್ಟಿ ಇಷ್ಟ ಬಂದ ಸಮಯಕ್ಕೆ ನೀರು ಬಿಡುತ್ತಿದ್ದು, ಸಾರ್ವಜನಿಕರಿಗೆ ಅನಾನುಕೂಲ ಆಗಿದೆ ಇದನ್ನು ಕೂಡಲೇ ಪರಿಶೀಲಿಸಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ರಮೇಶ್ ಮಾತನಾಡಿ, ಸಿದ್ದಾಪುರ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದು, ಸಾರ್ವಜನಿಕರ ಓಡಾಟಕ್ಕೆ ಯೋಗ್ಯವಿಲ್ಲದಂತಿದೆ ಆದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಪಂಚಾಯತಿಯಾಗಲಿ, ಕ್ಷೇತ್ರದ ಶಾಸಕರಾಗಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಕಡೆ ಡಾಂಬರೆ ಮಾಯವಾಗಿದ್ದು, ರಸ್ತೆ ಶಾಲಾ ಮಕ್ಕಳು, ಅನಾರೋಗ್ಯಸ್ಥರು, ಗರ್ಭಿಣಿಯರು, ವೃದ್ಧರು ಹೀಗೆ ಹಲವರು ಇದೇ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಹೀಗಾಗಿ ಜನಪ್ರತಿನಿಧಿಗಳು ಆದಷ್ಟು ಬೇಗ ಇತ್ತ ಗಮನ ಹರಿಸಿ ಸಾರ್ವಜನಿಕರ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಶಾ ರವರಿಗೆ ವಿವಿಧ ಬೇಡಿಕೆ ಈಡೇರಿಗೆ ಒತ್ತಾಯಿಸಿ ಪಕ್ಷದ ಮುಖಂಡರು ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಸದಸ್ಯರುಗಳಾದ ಬೈಜು, ಹನೀಫ, ಉಮ್ಮರ್, ಹಿರಿಯ ಮುಖಂಡ ಅಮ್ಮು ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

Share this article

ಟಾಪ್ ನ್ಯೂಸ್

More News