ಜನವಾಹಿನಿ News ಮಡಿಕೇರಿ : ಪತ್ರಕರ್ತರಿಗೆ ನಿರಂತರ ಕಲಿಕೆ ಮುಖ್ಯ. ಯಾವುದೇ ಸುದ್ದಿಯಾದರೂ ಸಕರಾತ್ಮಕ ವಿಮರ್ಶೆ ನೀಡಬೇಕು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಸಲಹೆ ನೀಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕೊಡಗು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪತ್ರಿಕೋದ್ಯಮ ಬಗ್ಗೆ ವಿಚಾರ ಸಂಕಿರಣ, ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂ ನಲ್ಲಿ ಎಐ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ಜ್ಞಾನಕ್ಕೆ ಮಿತಿ ಇಲ್ಲ. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪತ್ರಕರ್ತರು ಅತಿ ಮುಖ್ಯ. ರಾಜಕರಣಿಗಳು ತಲುಪದ ಕಡೆ ಪತ್ರಕರ್ತರು ತಲುಪುತ್ತಾರೆ. ಸಮಾಜದ ಸಮಸ್ಯೆಗಳನ್ನು ತೆರೆದಿಡುವ ಕೆಲಸ ಮಾಡುತ್ತಾರೆ. ಈ ಸಂದರ್ಭ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಆಗಬಾರದು. ಏಕವಚನ ಪ್ರಯೋಗ, ನಿರಾಧಾರ ಆರೋಪಗಳ ಬಗ್ಗೆ ಗಮನ ಹರಿಸಬೇಕು ಎಂದರು.
ರಾಜಕಾರಣಿಗಳು ತಪ್ಪು ಮಾಡುತ್ತಾರೆ. ಅದನ್ನು ಬರೆಯಬೇಡಿ ಎಂದು ಹೇಳುವುದಿಲ್ಲ. ಆದರೆ ಸಕಾರಾತ್ಮಕ ವಿಮರ್ಶೆ ಇರಲಿ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಷ್ಠೆ ಪತ್ರಕರ್ತರು ಮುಖ್ಯವಾಗಿದ್ದು, ಉತ್ತರದಾಯಿತ್ವ ಹಾಗೂ ಪಾರದರ್ಶಕತೆ ಇರಬೇಕು ಎಂದು ಶಾಸಕರು ನುಡಿದರು.
ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎಂ.ಎ.ಪೊನ್ನಪ್ಪ ಅವರು ಮಾತನಾಡಿ, ಭಾರತವು ಸ್ವತಂತ್ರ ದೇಶವಾಗಿ, ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡು 80 ವರ್ಷಗಳಾಗುತ್ತ ಬರುತ್ತಿವೆ. ನಾವು 50-60 ವರ್ಷಗಳ ಕಾಲ ಸಂವಿಧಾನದ ಮಹತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ. ಒಂದು ದೇಶದ ರಾಜಕೀಯ ವ್ಯವಸ್ಥೆ, ಅಲ್ಲಿರುವ ಜನ ಸಮುದಾಯಗಳು, ಅಧಿಕಾರಿಗಳು ಕೇವಲ ಹಕ್ಕು ಮತ್ತು ಅಧಿಕಾರಗಳ ಬಗ್ಗೆ ಮಾತ್ರ ಗಮನ ಹರಿಸುತ್ತ, ಕರ್ತವ್ಯವನ್ನು ಮರೆತರೆ ಹೀಗಾಗುತ್ತದೆ ಎನಿಸುತ್ತದೆ ಎಂದರು.
ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಸಂವಿಧಾನಕ್ಕಿರುವ ಪಾವಿತ್ರ್ಯ, ಅದರ ರಚನಾತ್ಮಕತೆ, ಅದು ಪ್ರತಿಪಾದಿಸುವ ಕರ್ತವ್ಯಶೀಲತೆ, ಅದು ನಮ್ಮೆಲ್ಲರಿಗೂ ದಯಪಾಲಿಸಿರುವ ಮೂಲಭೂತ ಹಕ್ಕುಗಳು, ಅದು ವಿಧಿಸಿರುವ ಕರ್ತವ್ಯಗಳು, ದೇಶದ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಸೂಚಿಸಿರುವ ನಿರ್ಬಂಧಗಳು, ಸಾಮೂಹಿಕ ಹಿತದ ದೃಷ್ಟಿಯಿಂದ ವಿಶೇಷವಾಗಿ ಪತ್ರಕರ್ತರು ರೂಢಿಸಿಕೊಳ್ಳಬೇಕಾದ ಹೊಣೆಗಾರಿಕೆಯ ಸ್ವರೂಪ ಇವೆಲ್ಲವೂ ಈಗ ಮುಂಚೂಣಿಗೆ ಬಂದಿದ್ದು, ರಚನಾತ್ಮಕವಾದ ಚರ್ಚೆ ನಡೆಯುತ್ತಿದೆ ಎಂದರು.
ಈ ಚರ್ಚೆಗಳಲ್ಲಿ ಪರ-ವಿರೋಧಗಳಿರಬಹುದು, ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳಿರಬಹುದು, ಅಸಮಾಧಾನ ಗಳಿರಬಹುದು ನಿಜ. ಇದು ರಾಜಕೀಯ ಐಡಿಯಾಲಜಿ ಮತ್ತು ನಾವು ಇದನ್ನೆಲ್ಲ ಯಾವ ಅನುಭವ, ಪ್ರಕರಣ, ತೀರ್ಪು, ಸಂದರ್ಭ, ಉಲ್ಲೇಖ, ಅಧ್ಯಯನ, ಪುಸ್ತಕ, ವ್ಯಕ್ತಿ, ಜನಾಂಗ, ಧರ್ಮ ಇತ್ಯಾದಿಗಳ ಹಿನ್ನೆಲೆಯಲ್ಲಿ ನೋಡುತ್ತಿರುತ್ತೇವೆ ಎನ್ನುವುದನ್ನು ಅವಲಂಬಿಸಿದೆ. ಇವುಗಳನ್ನು ನಾವು ಅಲ್ಲಗಳೆಯಬಾರದು. ಏಕೆಂದರೆ, ಇದೇ ಪ್ರಜಾಪ್ರಭುತ್ವದ ಚೆಲುವು ಎಂದು ಎಂ.ಎ.ಪೊನ್ನಪ್ಪ ಅವರು ವಿವರಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಅದರ ಬೆನ್ನಲ್ಲೇ ನಡೆದ ಸಂವಿಧಾನ ರಚನೆ ಎರಡನ್ನೂ ನೋಡಿದರೆ, ಅಲ್ಲಿ ದುಡಿದಿರುವವರೆಲ್ಲರೂ ಪತ್ರಕರ್ತರಾಗಿ, ಸಂಪಾದಕರಾಗಿ, ಪತ್ರಿಕೆಗಳ ಸ್ಥಾಪಕರಾಗಿ ಈ ಸಮಾಜದ ಒಳಿತಿನ ಬಗ್ಗೆ ಬರೆದವರೇ ಆಗಿದ್ದಾರೆ. ಅವರ ದೃಷ್ಟಿಯಲ್ಲಿ ಪತ್ರಿಕಾರಂಗ ಬಿಜಿನೆಸ್ ಆಗಿರಲಿಲ್ಲ. ಬದಲಿಗೆ, ಸಮಾಜಸೇವೆಯ ಒಂದು ಮಾರ್ಗವಾಗಿತ್ತು ಎಂದು ನುಡಿದರು.
ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಒಂದು ಸಂವಿಧಾನವನ್ನು ಕೊಟ್ಟರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಹೀಗೆ ಅವರಲ್ಲಿ ಸಮಾಜದಲ್ಲಿ ಸಮಾನತೆ, ಸಹೋದರತ್ವ, ಸೌಹಾರ್ದ, ಸುಧಾರಣೆ ಮತ್ತು ಸಬಲೀಕರಣಗಳಿಗೆ ಮಿಡಿಯುತ್ತಿದ್ದ ಒಬ್ಬ ಒಳ್ಳೆಯ ಪತ್ರಕರ್ತನಿದ್ದ. ಹೀಗಾಗಿಯೇ ಅವರು ಸಂವಿಧಾನದಲ್ಲಿ ಶ್ರೇಷ್ಠವಾದ ಸಂಗತಿಗಳನ್ನು ಸೇರಿಸಲು ಸಾಧ್ಯವಾಯಿತು ಎನ್ನುವುದು ನನ್ನ ನಂಬಿಕೆಯಾಗಿದೆ ಎಂದು ಎಂ.ಎ.ಪೊನ್ನಪ್ಪ ಅವರು ಹೇಳಿದರು.
ಸಂವಿಧಾನದಲ್ಲಿ ಎಲ್ಲರನ್ನೂ ಒಳಗೊಳ್ಳುವ’ ಮತ್ತು ಪ್ರಜಾಪ್ರಭುತ್ವವನ್ನು ಅಂಗೀಕರಿಸುವ ಚಾರಿತ್ರಿಕ ವಿದ್ಯಮಾನಗಳಿಗೆ ಈ ದೇಶವು ಸಾಕ್ಷಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗು ಪತ್ರಿಕೆಯ ಸಂಪಾದಕರಾದ ಪಂದ್ಯಂಡ ಬೆಳ್ಳಿಯಪ್ಪ, ಕೊಡಗಿನ ಪ್ರಥಮ ಮುಖ್ಯಮಂತ್ರಿಯಾಗಿದ್ದ ಚೆಪ್ಪುಡಿರ ಎಂ.ಪೂಣಚ್ಚ, ಕೊಡಂದೆರ ಕುಟ್ಟಯ್ಯ, ಕೋದಂಡ ಅಪ್ಪಯ್ಯ, ಸಿ.ಎಸ್ ವೆಂಕಪಯ್ಯ, ಎಂ.ಎಂ. ಸಿದ್ದಿಕ್, ಸ್ವಾತಂತ್ರ್ಯಾ ನಂತರ ಬಿ.ಡಿ. ಗಣಪತಿ, ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಸ್ಥಾಪಕ ಬಿ.ಎಸ್. ಗೋಪಾಲಕೃಷ್ಣ ಇವರೆಲ್ಲರೂ ಪತ್ರಕರ್ತರಾಗಿ ದುಡಿದವರು. ರಾಷ್ಟ್ರದ ಸಂವಿಧಾನವನ್ನು ಕೊಡಗಿನ ಜನತೆಗೆ ಪತ್ರಿಕೆಯ ಮೂಲಕ ಮನದಟ್ಟು ಮಾಡಿಕೊಟ್ಟವರು. ಸುದ್ದಿ ಮಾಧ್ಯಮವನ್ನು ನಮ್ಮಲ್ಲಿ ‘ನಾಲ್ಕನೆಯ ಆಧಾರಸ್ತಂಭ’. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳಷ್ಟೇ ಪ್ರಾಮುಖ್ಯತೆ ಸುದ್ದಿ ಮಾಧ್ಯಮಕ್ಕೂ ಇದೆ. ಹೀಗಾಗಿಯೇ ಸಂವಿಧಾನದ 19(1)ನೇ ವಿಧಿಯು ನಮ್ಮೆಲ್ಲರಿಗೂ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯಗಳನ್ನು ಒಂದು ಮೂಲಭೂತ ಹಕ್ಕಾಗಿ ನೀಡಿದೆ. ಇದರ ಬೆಲೆಯನ್ನು ಪತ್ರಕರ್ತರು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಪೊನ್ನಪ್ಪ ಅವರು ಸಲಹೆ ಮಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ ಪ್ರಾಸ್ತವಿಕ ಮಾತನಾಡಿ, ಮಾಧ್ಯಮ ಮತ್ತು ಸಂವಿಧಾನ ಅಗತ್ಯ. ಪತ್ರಕರ್ತರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಪತ್ರಕರ್ತರು ಸಂವಿಧಾನವನ್ನು ಅರಿತು ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಸುದ್ದಿ ಮಾಧ್ಯಮದಲ್ಲಿ ಭಾಷೆ ಬಳಕೆಯ ಬಗ್ಗೆ ಅರಿವು ಹೊಂದಿರಬೇಕು. ಮಾಧ್ಯಮ ಅಕಾಡೆಮಿಯಿಂದ ಎಲ್ಲ ಕಡೆ ಪ್ಯಾಕ್ಟ್ ಚೆಕ್ಕಿಂಗ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದು ಸುಳ್ಳು ಸುದ್ದಿಗಳ ಬಗ್ಗೆ ಸಮರವಾಗಿದೆ ಎಂದು ಅವರು ಹೇಳಿದರು.
ವಿಚಾರ ಸಂಕಿರಣ : ಗೋಷ್ಠಿ 1 ರಲ್ಲಿ ಫ್ಯಾಕ್ಟ್ ಚೆಕ್ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಎಂಬ ವಿಷಯದ ಕುರಿತು ಹಿರಿಯ ಪತ್ರಕರ್ತರಾದ ಸಮೀವುಲ್ಲಾ ಮಾತನಾಡಿ, ನಾವು ಸುದ್ದಿಸ್ಪೋಟದಂತಹ ಕಾಲಘಟ್ಟದಲ್ಲಿದ್ದೇವೆ. ಮುದ್ರಣ ಮಾಧ್ಯಮವೂ ಈ ಹಂತದಲ್ಲಿದೆ. ನಾವು ಭಾಷೆ ಬೆಳೆಸುವ ಬದಲು ಕೊಲ್ಲುತ್ತಿದ್ದೇವಾ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಭಾಷೆ ಮನುಷ್ಯತನವನ್ನೆ ಅಣಕಿಸುವ ಹಾಗಿದೆ. ಪತ್ರಕರ್ತರು ವಿಶೇಷ ಜೀವಿಗಳಲ್ಲ, ಪ್ರಶ್ನಾತೀತರಲ್ಲ. ನಮಗೆ ನಾವೆ ಲಕ್ಷ್ಮಣ ರೇಖೆ ಹಾಕಿಕೊಳ್ಳುವ ಕಾಲ ಮುಗಿದಿದೆ. ಎಚ್ಚೆತ್ತುಕೊಳ್ಳದೇ ಹೋದರೆ ಮುಂದೆ ಕಷ್ಟ ಎಂದು ಹೇಳಿದರು.
ಸುದ್ದಿ ಬರೆಯುವುದು ಒಂದು ಕಲೆಗಾರಿಕೆ. ಭಾಷೆಯನ್ನು ಮಾರಾಟದ ಸಾಧನವಾಗಿದೆ. ಅಸಭ್ಯ ದ್ವಂದಾರ್ಥದ ಭಾಷೆ ಪತ್ರಿಕೋದ್ಯಮ ಅಲ್ಲವೇ ಅಲ್ಲ. ಭಾಷೆ ಹದ ತಪ್ಪಿದರೆ ಯುದ್ದವೇ ಉಂಟಾಗಿತ್ತದೆ. ಭಾಷಾ ಗಾಂಭೀರ್ಯ ಇರಬೇಕು.
ಭಾಷಾ ಬಳಕೆ ಕುರಿತು ಜವಾಬ್ದಾರಿ ಇರಬೇಕು. ಭಾಷಾ ಬೆಳವಣಿಗೆಗೆ ಪತ್ರಿಕೋದ್ಯಮದ ಕೊಡುಗೆ ಇದೆ. ಸುದ್ದಿಯನ್ನು ಭಾಷೆಯ ಮೂಲಕ ಕೊಡುವುದು ಪತ್ರಿಕೋದ್ಯಮದ ಕೆಲಸ. ಕಾನೂನಿನ ಕಾಯ್ದೆಗಳು ಹೊಸಹೊಸದಾಗಿ ಬರುತ್ತಿದೆ. ಭಾಷೆಯನ್ನು ಗಂಭೀರವಾಗಿ ಅರ್ಥ ಮಾಡಿಕೊಳ್ಳದೇ ಹೋದರೆ ಜೈಲು ಸೇರಬೇಕಾಗುತ್ತದೆ. ಬೇರೆಯವರಿಗೆ ನೋವಾಗದಂತೆ, ಚಾರಿತ್ರ್ಯಿಕ ವಧೆಯಾಗದ ಹಾಗೆ ಭಾಷೆ ಬಳಕೆ ಮಾಡಬೇಕು ಎಂದು ಸಮೀವುಲ್ಲಾ ಅವರು ಸಲಹೆ ಮಾಡಿದರು.
ಸುಧಾ ವಾರಪತ್ರಿಕೆಯ ಸಂಪಾದಕರಾದ ರಶ್ಮಿ ಎಸ್.ಮಾತನಾಡಿ, ಕನ್ನಡದ ಭಾಷೆಗಿರುವ ಧ್ವನಿ ಇಂದು ಪತ್ರಿಕೋದ್ಯಮದಲ್ಲಿ ಕಳೆದು ಹೋಗುತ್ತಿದೆ. ಧ್ವನಿ ಹಿಡಿಯುವ ಭಾಷೆ ನಮ್ಮದಾಗಬೇಕು. ಸಂಜಯನ ಪಾತ್ರದಂತೆ, ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆದರೆ ನಾವು ಮಂಥರೆಯ ಭಾಷೆ ಬಳಸುತ್ತಿದ್ದೇವೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.
ನಮ್ಮ ಓದುಗರು ನಮಗಿಂತ ಹೆಚ್ಚು ತಿಳಿದವರು. ಆದ್ದರಿಂದ ನಮ್ಮಲ್ಲಿ ಸಾಕಷ್ಟು ಪದಸಿರಿ ಇರಬೇಕು. ನಮ್ಮ ಬಂಡವಾಳ ಶಬ್ದಗಳೇ ಆಗಿರಬೇಕು. ಭಾಷೆ ಬಳಸುವ ವೇಳೆ ಜಿಪುಣರಾಗಬೇಕು. ತೂಕದ ಶಬ್ದ ಬಳಕೆ ಮಾಡಬೇಕು. ನೈಸರ್ಗಿಕ ಬುದ್ದಿವಂತಿಕೆ ಇರಬೇಕು. ಸುದೀರ್ಘವಾದ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಗೋಷ್ಠಿ- 2ರಲ್ಲಿ ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂ ನಲ್ಲಿ ಎಐ ಎಂಬ ವಿಷಯದ ಕುರಿತು ದೆಹಲಿ ಪದವೀಧರರು ಹಾಗೂ ಎಐ ಪರಿಣಿತರಾದ ಐಐಟಿ ರಾಹುಲ್ ಗುಂಡಾಲ ಅವರು ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅನಿಲ್ ಎಚ್.ಟಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಸವಿತಾ ರೈ ಹಾಗೂ ಇತರರು ಇದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎನ್.ಎಸ್.ಮಹೇಶ್ ಸ್ವಾಗತಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿದರು.







