ಜನವಾಹಿನಿ News ಸಿದ್ದಾಪುರ : ಅಕ್ರಮವಾಗಿ ಬೀಟೆ ಮರ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿ, ಸುಮಾರು ₹10 ಲಕ್ಷ ಮೌಲ್ಯದ ಬೀಟೆ ನಾಟಾಗಳನ್ನು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮದ ನವೀನ್ ಸೋಮಣ್ಣ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯ ಮೇರೆಗೆ ಅರಣ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಈ ವೇಳೆ 7.108 ಘನ ಮೀಟರ್ ಪ್ರಮಾಣದ ಬೀಟೆ ನಾಟಾ ಪತ್ತೆಯಾಗಿದ್ದು, ಅವುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ, ಒಂದು ಸ್ಕೂಟಿ ಮತ್ತು ಒಂದು ಬೈಕ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟದ ಮಾಲೀಕ ನವೀನ್ ಸೋಮಣ್ಣ, ನಾಪ್ಲೋಕಿನ ಹನೀಫ್, ಅಬ್ಬಾಸ್ ಹಾಗೂ ಲಾರಿ ಚಾಲಕ ಅವಿನಾಶ್ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಬಲೆ ಬೀಸಿದೆ.
ಡಿ.ಎಫ್.ಓ. ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಓ. ಶಿವರಾಮ್, ಡಿ.ಆರ್.ಎಫ್.ಓ. ರಾಘವ, ಶ್ರೀನಿವಾಸ್, ಲೋಕೇಶ್ ಹಾಗೂ ಅರಣ್ಯ ಇಲಾಖೆಯ ವಾಹನ ಚಾಲಕರಾದ ಆಶೋಕ್, ನಂದೀಶ್ ಮತ್ತು ಸಿಬ್ಬಂದಿಗಳಾದ ಹರೀಶ್, ಮಹೇಶ್, ಸುರೇಶ್, ಮುರುಗ, ಅನಿಲ್, ಮೊಣ್ಣಪ್ಪ, ಹರ್ಷಿತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.








