Breaking News :

ಕಾಡಾನೆ ಹಾವಳಿ ತಡೆಗೆ ವಿಫಲ, ರೈತರ ಕಡೆಗಣನೆ ಆರೋಪ : ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ, ವಾಹನ ಜಾಥಾ

 


ಜನವಾಹಿನಿ NEWS ಮಡಿಕೇರಿ : ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾಗೂ ಮಾನವ ಸಂಘರ್ಷವನ್ನು ತಡೆಯಲು ವಿಫಲವಾದ ಹಾಗೂ ರೈತರನ್ನು ಕಡೆಗಣಿಸಿರುವ ರಾಜ್ಯ ಸರ್ಕಾರದ ದೋರಣೆಯ ವಿರುದ್ಧ ಸೋಮವಾರ ಬೃಹತ್ ಜನಾಕ್ರೋಶ ವಾಹನ ಜಾಥಾ ಹಾಗೂ ಪ್ರತಿಭಟನಾ ಸಭೆ ಮಡಿಕೇರಿ ನಗರದಲ್ಲಿ ನಡೆಯಿತು.

ಜಿಲ್ಲೆಯ ಭಾಗಮಂಡಲ, ಸೋಮವಾರಪೇಟೆ, ಕುಟ್ಟ, ಸಿದ್ದಾಪುರ, ತೊರೆನೂರು ವ್ಯಾಪ್ತಿಯಿಂದ ನೂರಾರು ವಾಹನಗಳ ಮೂಲಕ ಕಾರ್ಯಕರ್ತರು, ರೈತರೊಂದಿಗೆ ವಾಹನ ಜಾಥಾ ಮೂಲಕ ಆಗಮಿಸಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡರು.

ಈ ಸಂದರ್ಭ ಕೊಡಗು ಮತ್ತು ಮೈಸೂರು ಸಂಸದರಾದ ಯದುವೀರ್ ಒಡೆಯರ್, ಜಿಲ್ಲೆಯ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‌ಸಿ ಸುಜಾಕುಶಾಲಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು, ರೈತರು ವಾಹನ ಜಾಥದಲ್ಲಿ ಪಾಲ್ಗೊಂಡಿದ್ದರು.

ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ವಾಟ್ಸಪ್ ಗ್ರೂಪ್‌ಗಳಲ್ಲಿ ನೋಡಿದರೆ ಕೊಡಗು ಸಿಂಗಾಪುರ ಆಗಿದೆ ಎಂಬಂತೆ ಬಿಂಭಿಸಲಾಗುತ್ತಿದೆ. ಆದರೆ, ಕೊಡಗು ರಸ್ತೆಗಳಲ್ಲಿ ತೆರಳಿದರೆ ತಿಳಿಯುತ್ತದೆ ಸಿಂಗಾಪುರದ ಅವಸ್ಥೆ ಎಂದು ಟೀಕಿಸಿದ ಅವರು, ಮೂರು ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶಾಸಕರು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಅಂದು ಬಿಜೆಪಿ ಸರ್ಕಾರವಿದ್ದ ಸಂದರ್ಭ ೧೨೦ ಕೋಟಿ ಹಣ ನೀಡಿದ್ದೆವು. ಆ ಹಣದಲ್ಲಿ ಎಷ್ಟು ಕೆಲಸವಾಗಿದೆ. ಆ ನಂತರ ೨೦೨೩-೨೦೨೪ ರಲ್ಲಿ ಬಂದ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ೧೨೦ ಕೋಟಿ ಅನುದಾನ ಘೋಷಣೆ ಮಾಡಿತ್ತು. ಇದರಲ್ಲಿ ಎಷ್ಟು ರೈಲ್ವೆ ಬ್ಯಾರಿಕೇಡ್ ಹಾಕಿದ್ದೀರಿ?. ಆನೆ ಕಂದಕ ನಿರ್ಮಾಣ ಎಷ್ಟು ಮಾಡಿದ್ದೀರಾ?. ಎಷ್ಟು ಆನೆ ಕಂದಯ ದುರಸ್ತಿ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಇಂದು ಚುನಾವಣಾ ಪ್ರಣಾಳಿಕೆಯಲ್ಲಿನ ಘೋಷಣೆ ಘೋಷಣೆಯಾಗೇ ಉಳಿದಿದೆ. ಕಾಂಗ್ರೆಸ್ ಜನತೆಗೆ ಮೋಸ ಮಾಡುತ್ತಾ ಅಧಿಕಾರ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು ಅವರು, ಆನೆ ಮಾನವ ಸಂಘರ್ಷದಿಂದ ಕಾರ್ಮಿಕರೇ ತೋಟ ಕೆಲಸಕ್ಕೆ ಹೊಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತು ಮಾತಿಗೆ ಕೇಂದ್ರ ಸರ್ಕಾರ ಜವಾಬ್ದಾರಿ ಎಂದು ಹೇಳುತ್ತಾರೆ. ಆದರೆ, ಆನೆ ಮಾನವ ಸಂಘರ್ಷ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಅಥವಾ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಅನುದಾನ ಘೋಷಣೆಯಾದರೂ ಕೂಡ ಅದನ್ನು ಅನುಷ್ಠಾನ ತರುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಅದನ್ನು ಮಾಡುತ್ತಿಲ್ಲ ಎಂದು ದೂರಿದ ಅವರು, ರಾಜ್ಯ ಸರ್ಕಾರದ ಕರ್ತವ್ಯ ಏನಿದೆ ಅದನ್ನು ಮೊದಲು ಮಾಡಿ ಎಂದರು.

ನಿಯಂತ್ರಣಕ್ಕೆ ಬೇಕಾದ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಇಲ್ಲದಿದ್ದರೆ ಕೊಡಗು ಜಿಲ್ಲೆಯಲ್ಲಿ ಜನತೆಯೇ ಕಾನೂನು ಕ್ರಮ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಬಿಜೆಪಿ ಜನಪರ ಹೋರಾಟ ಮುಂದುವರೆಯುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸಿ ಮತ್ತು ಡಿ ಲ್ಯಾಂಡ್‌ನ್ನು ಅರಣ್ಯಕ್ಕೆ ವರ್ಗಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಇದು ಪರಿಸರವಾದಿಗಳ ಕುಮ್ಮಕ್ಕಿನಿಂದ ಇದಾಗಿದೆ ಎಂದು ದೂರಿದ ಅವರು, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಗೆ ಬಂದ ಹಿನ್ನೆಲೆ ೫೦೦೦ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿಗೆ ತಳ್ಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಸರ್ಕಾರ ಜನವಿರೋಧಿ, ರೈತವಿರೋಧಿ, ದಲಿತ ವಿರೋಧಿ ಸರ್ಕಾರವಾಗಿದೆ ಎಂದು ದೂರಿದ ಅವರು, ಅಂದು ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭ ೩೫೦೦ ಜನರಿಗೆ ಹಕ್ಕುಪತ್ರವನ್ನು ವಿತರಿಸಿದ್ದೇವೆ. ಆದರೆ, ಈಗಿನ ಸರ್ಕಾರ ಇಂತಹದನ್ನು ಮಾಡದೇ ಕಾಯ್ದೆಗಳನ್ನು ಜಾರಿಗೆ ತಂದು ಎತ್ತಂಗಡಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲಿ ಶಾಸಕರು ೨೦-೨೫ ವರ್ಷ ಏನು ಅಭಿವೃದ್ಧಿಯಾಗಿತ್ತು ಎಂದು ಹೇಳುತ್ತಾರೆ. ಆದರೆ, ಅಂದಿನ ಬಿಜೆಪಿ ಸರ್ಕಾರ ಇದ್ದಾಗ ರಸ್ತೆ ಅಭಿವೃದ್ಧಿ ಆಗುತ್ತಿತ್ತು. ಆನೆ ಕಂದಕ ನಿರ್ಮಾಣ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಆಗುತ್ತಿತ್ತು. ಅದರೆ, ಇಂದು ಯಾವುದೇ ಅಭಿವೃದ್ಧಿ ಇಲ್ಲ. ಆನೆ ಕಂದಕ ದುರಸ್ಥಿಯಾಗುತ್ತಿಲ್ಲ ಎಂದು ದೂರಿದ ಅವರು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ರಾಜ್ಯ ಸರ್ಕಾರ ತಂದಿರುವ ಆದೇಶಗಳನ್ನು ರದ್ದು ಪಡಿಸುತ್ತೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಂಪಡ ರವಿಕಾಳಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ರೈತರು ಹಾಗೂ ಕಾರ್ಮಿಕರು ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅನೇಕರು ಅಂಗವಿಕಲತೆ ಅನುಭವಿಸುತ್ತಿದ್ದಾರೆ. ಕಾಡಾನೆಗಳ ಮಾರ್ಗ ಬದಲಿಸಿ ಹುಲಿ ಮತ್ತು ಚಿರತೆ ದಾಳಿಯಿಂದ ಜಾನುವಾರುಗಳು ಹಾಗೂ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. ರೈತರಿಗೆ ರಾಜ್ಯ ಸರ್ಕಾರ ನಾಮಕಾವಸ್ತೆಗೆ ಸಣ್ಣ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಆನೆ ಹಾವಳಿ ನಿಯಂತ್ರಣಕ್ಕೆ ಮುಂದಾಗದಿದ್ದಲ್ಲಿ ವಿಧಾನಸೌದಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ವಾಸದ ಮನೆ ಹಾಗೂ ಕೃಷಿ ಮಾಡಿಕೊಂಡು ೪-೫ ತಲೆಮಾರು ಬದುಕುತ್ತಿರುವ ರೈತರು ಹಾಗೂ ಬಡವರನ್ನು ಪ್ರಸ್ತುತ ಇರುವ ರಾಜ್ಯ ಸರ್ಕಾರ ಹಕ್ಕು ಪತ್ರ ನೀಡದೆ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ. ರೈತರು ಹಾಗೂ ಬಡವರ ಬಳಿ ಇರುವ ಜಮೀನನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಸರ್ಕಾರ ಕೊಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಲಕ್ಷಾಂತರ ಹಣ ವ್ಯಯ ಮಾಡುತ್ತಿದೆ. ಆದರೆ, ಆನೆ ಮಾನವ ಸಂಘರ್ಷಕ್ಕೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಇದಕ್ಕೆ ಪ್ರತ್ಯೇಕವಾಗಿ ಅನುಧಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಎಂಎಲ್‌ಸಿ ಸುಜಾಕುಶಾಲಪ್ಪ ಮಾತನಾಡಿ, ಇಂದು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಹೆಚ್ಚಾಗಿ ಸಾಕಷ್ಟು ಬೆಳೆ ಹಾನಿ ಸಂಭವಿಸುತ್ತಿದೆ. ಆನೆ ಕಂದಕ ನಿರ್ಮಾಣ ಜತೆಗೆ ದುರಸ್ಥಿಯಾಗಬೇಕು. ಜತೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಆನೆ ಮಾನವ ಸಂಘರ್ಷ ಕುರಿತು ಅಧಿವೇಶನದಲ್ಲಿ ಅರಣ್ಯ ಸಚಿವರನ್ನು ಕೇಳಿದ ಸಂದರ್ಭ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿದ್ದೇವೆ. ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ನೀಡುತ್ತಾರೆಯೇ ಹೊರತು ಶಾಶ್ವತ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಇಂದು ಯಾವುದೇ ಸಮಸ್ಯೆಗೆ ಹೋರಾಟದಿಂದ ಮಾತ್ರ ಗೆಲುವು ಸಾಧ್ಯ. ಆದ್ದರಿಂದ ಮುಂದಿನ ದಿನಗಳಲ್ಲಿ ೫ ಮಲೆನಾಡು ಪ್ರದೇಶ(ಆನೆ ದಾಳಿಹೆಚ್ಚಿರುವ ಪ್ರದೇಶ) ವ್ಯಾಪ್ತಿಯಲ್ಲಿ ರೈತರನ್ನು ಸಂಘಟನೆ ಮಾಡಿ ಬಿಜೆಪಿಯಿಂದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ ಮಾತನಾಡಿ, ಹೋರಾಟ ಮಾಡಿದರು ರಾಜ್ಯ ಸರ್ಕಾರ ಕಿಮ್ಮತ್ತು ನೀಡುತ್ತಿಲ್ಲ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾತ್ರ ಆಗುತ್ತಿದೆ. ಸಮಸ್ಯೆ ಬಂದಾಗ ಒಗ್ಗಟ್ಟಿನಿಂದ ಹೋರಾಟ ಮಾಡಿದ್ದಲ್ಲಿ ಯಶಸ್ವಿ ಸಾಧ್ಯ ಎಂದರು.

ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ವಿ.ಕೆ.ಲೋಕೇಶ್, ಮಹೇಶ್ ಜೈನಿ, ಚಲನ್ ಕುಮಾರ್, ವಕ್ತಾರ ಅರುಣ್ ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ರಾಬಿನ್ ದೇವಯ್ಯ, ಬಿ.ಬಿ.ಭಾರತೀಶ್, ಮಾಜಿ ಎಂಎಲ್‌ಸಿ ಎಚ್.ಜಿ.ಮೇದಪ್ಪ, ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಮುಖಂಡರಾದ ಡಾ.ನವೀನ್ ಕುಮಾರ್ ಇದ್ದರು. ಈ ಸಂದರ್ಭ ಜಿಲ್ಲೆಯ ವಿವಿಧೆಡೆಯಿಂದ ೭೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕೃಷಿಕರು ಪಾಲ್ಗೊಂಡಿದ್ದರು.

 

ಕೇಂದ್ರದಿಂದ ೩೫೦ ಕೋಟಿ ಅನುದಾನ

ಮಡಿಕೇರಿ: ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ರೂ.೩೫೦ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಆದರೆ ಈ ಹಣವನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜನರ ಜೀವ ರಕ್ಷಣೆಗೆ ಸಂಬಂಧಿಸಿದ ಗಂಭೀರ ವಿಷಯ ಇದಾಗಿದ್ದು, ಎಲ್ಲಾ ಜನಪ್ರತಿನಿಧಿಗಳು ಒಂದಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.

ಸಾವುಗಳು ಹೆಚ್ಚುತ್ತಿವೆ, ಕ್ರಮವಿಲ್ಲ: ಕಳೆದ ಕೆಲವು ದಿನಗಳಲ್ಲಿ ಮದೆನಾಡಿನಲ್ಲಿ ಶಾಲಾ ವಿದ್ಯಾರ್ಥಿನಿ, ತಿತಿಮತಿಯಲ್ಲಿ ಐಪಿಎಸ್ ಅಧಿಕಾರಿಯ ಪತ್ನಿ ಸೇರಿದಂತೆ ಹಲವರು ಕಾಡುಪ್ರಾಣಿಗಳ ದಾಳಿಗೆ ಬಲಿಯಾಗಿದ್ದಾರೆ. ಇಷ್ಟೆಲ್ಲಾ ದುರಂತಗಳು ನಡೆದರೂ ಸರ್ಕಾರದ ಕಡೆಯಿಂದ ಗೋಚರಿಸುವಂತಹ ಕ್ರಮಗಳೇನೂ ಇಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಹಣ ನೀಡಿಲ್ಲ ಎಂಬುದು ಸುಳ್ಳು : ಯದು

 ಕರ್ನಾಟಕಕ್ಕೆ ಕೇಂದ್ರದಿಂದ ಯಾವುದೇ ಅನುದಾನ ಬಂದಿಲ್ಲ ಎಂಬುದು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ ಯದುವೀರ್, ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಕೊಡಗಿನ ಸಮಸ್ಯೆಯ ತೀವ್ರತೆಯನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು.

ರಾಜ್ಯದಲ್ಲಿ ಅರಣ್ಯ ಸಚಿವರೇ ಇಲ್ಲದಿರುವುದು, ಅರಣ್ಯ ಇಲಾಖೆಯ ನಿಷ್ಕ್ರಿಯತೆ ಮತ್ತು ವಯನಾಡಿಗೆ ಮಾತ್ರ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಅವರು ತರಾಟೆಗೆ ತೆಗೆದುಕೊಂಡರು. ಕೊಡಗಿನ ಜನರ ಸುರಕ್ಷತೆಯ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ದೂರಿದರು.

ಕೇಂದ್ರಕ್ಕೆ ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರದೊಂದಿಗೆ ಜಂಟಿಯಾಗಿ ಕೆಲಸ ಮಾಡಲು ನಾವು ಯಾವಾಗಲೂ ಸಿದ್ಧರಿದ್ದೇವೆ. ಆದರೆ, ರಾಜ್ಯದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ. ಬದಲಾಗಿ ಪ್ರತಿ ಸಮಸ್ಯೆಗೂ ಕೇಂದ್ರವನ್ನೇ ದೂಷಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಟೀಕಿಸಿದರು.

ರಾಜ್ಯ ಸರ್ಕಾರ ಕೂಡಲೇ ಕೈಜೋಡಿಸಿ ಜನರ ರಕ್ಷಣೆಗೆ ಮುಂದಾಗಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವನ್ಯಜೀವಿ ಉಪಟಳಕ್ಕೆ ಶಾಶ್ವತ ಪರಿಹಾರ ನೀಡುತ್ತೇವೆ. ಇದು ಬಿಜೆಪಿಯ ರಾಜಕೀಯ ಯಾತ್ರೆಯಲ್ಲ. ಇದು ಕೊಡಗಿನ ಜನರ ನೋವು ಮತ್ತು ಆಕ್ರೋಶದ ಪ್ರತಿಬಿಂಬ ಎಂದರು.

Share this article

ಟಾಪ್ ನ್ಯೂಸ್