ಭೂಕುಸಿತ ಸಂಭವಿಸಿದ ಕೇರಳದ ವಯನಾಡಿನಲ್ಲಿ ವ್ಯಾಪಕ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇದೀಗ ಅಧಿಕೃತ ವರದಿಗಳ ಪ್ರಕಾರ ಸಾವಿನ ಸಂಖ್ಯೆ 83ಕ್ಕೆ ತಲುಪಿದೆ. 100 ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಕಂದಾಯ ಸಚಿವ ಕೆ ರಾಜನ್ ಅವರ ಕಚೇರಿ ತಿಳಿಸಿದೆ.
ಸರ್ಕಾರದ ಪ್ರಯತ್ನಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿರುವಾಗ, ಕೇರಳದ ಜನರು ಸಹ ತಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳಲ್ಲಿ ಸ್ವಯಂಸೇವಕರಾಗಿ ಕಾರ್ಯ, ಸಹಾಯವಾಣಿಗಳ ಸ್ಥಾಪನೆ, ರಕ್ತದಾನ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ.
ಜುಲೈ 30 ಮಂಗಳವಾರ ಮುಂಜಾನೆ ವಯನಾಡಿನ ಮೆಪ್ಪಾಡಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ನಂತರ 250 ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಮತ್ತು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೇರಳ ಸಚಿವ ಎಂ.ಬಿ.ರಾಜೇಶ್ ತಿಳಿಸಿದ್ದಾರೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ಪೀಡಿತ ಪ್ರದೇಶಕ್ಕೆ ಅಗ್ನಿಶಾಮಕ ದಳ ಮತ್ತು ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿ ಎನ್ಡಿಆರ್ಎಫ್ ತಂಡ ವಯನಾಡ್ಗೆ ತೆರಳುತ್ತಿದೆ.
ಎನ್ಡಿಆರ್ಎಫ್ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿರುವುದರಿಂದ, ಪ್ರಸ್ತುತ ನಡೆಯುತ್ತಿರುವ ಪರಿಹಾರ ಕಾರ್ಯಗಳಿಗೆ ನೆರವಾಗಲು ವಯನಾಡ್ನ ಚೂರಲ್ಮಲಾದಲ್ಲಿರುವ ಮಸೀದಿ ಮತ್ತು ಮದರಸಾದಲ್ಲಿ ತಾತ್ಕಾಲಿಕ ಆಸ್ಪತ್ರೆ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವರ ಕಚೇರಿ ಹೇಳಿದೆ. ಮಸೀದಿ ಮತ್ತು ಚರ್ಚ್ ಗಳಲ್ಲಿ ಸ್ವಯಂಪ್ರೇರಿತವಾಗಿ ಇದಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ, ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ ಹೇಳಿಕೆಯಲ್ಲಿ, ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಲು ಸರ್ಕಾರಿ ಸಂಸ್ಥೆಗಳು ಮತ್ತು ಸಾಮಾಜಿಕ ಸಂಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದೆ.







