ಜನವಾಹಿನಿ News ಮಡಿಕೇರಿ : ಕಳೆದ ೩ ವರ್ಷಗಳಿಂದ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ೩೭ ಸಾವಿರ ಕೋಟಿ ರೂಪಾಯಿ ಬಿಲ್ ತಕ್ಷಣ ಪಾವತಿಸುವಂತೆ ಒತ್ತಾಯಿಸಿ ಗುತ್ತಿಗೆದಾರರ ಸಂಘವು ಮಾ.೬ರಂದು ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಸಂಘದ ಕಾರ್ಯಧ್ಯಕ್ಷ ವಿ.ಎ.ಲಾರೆನ್ಸ್ ಹೇಳಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ೩೭ ಸಾವಿರ ಕೋಟಿ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿದೆ. ಗುತ್ತಿಗೆದಾರರು ರಾಜ್ಯಪಾಲರ ಆದೇಶದನ್ವಯ ಕಾಮಗಾರಿಗಳನ್ನು ನಿರ್ವಹಿಸುತ್ತಾರೆ. ಸರ್ಕಾರವೇ ಹಣಕ್ಕೆ ನೇರ ಹೊಣೆಯಾಗಿರುತ್ತದೆ. ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಹಣವನ್ನು ಮೀಸಲಿಡದೆ ಟೆಂಡರ್ ಕರೆದಿತ್ತು ಎಂದು ಈಗಿನ ಸರ್ಕಾರ ಸಮಜಾಯಿಷಿ ನೀಡುತ್ತಿದೆ. ಟೆಂಡರ್ ಪ್ರಕ್ರಿಯೆ ನಡೆದ ಬಳಿಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ಗುತ್ತಿಗೆದಾರರು ಶ್ರಮವಹಿಸಿ, ತಮ್ಮ ಹಣ, ಒಡವೆ ಅಡವಿಟ್ಟು ಅಥವಾ ಸಾಲ ಮಾಡಿ ಕೆಲಸ ಪೂರೈಸಿರುತ್ತೇವೆ. ಈಗ ಬಾಕಿ ಬಿಲ್ ಕೇಳಿದ್ರೆ ಅದು ಹಳೆಯ ಸರ್ಕಾರದ್ದು ಎಂದು ಸಬೂಬು ಹೇಳುತ್ತಿದ್ದಾರೆ. ಇದು ಖಂಡನೀಯ ಎಂದು ಹೇಳಿದರು.
ಈ ಸಂಬಂಧ ಸಿಎಂ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಬಾಕಿ ಹಣ ಪಾವತಿಗೆ ಒತ್ತಾಯಿಸಿ ಮಾ.೬ರಂದು ಕಾಮಗಾರಿ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ಕೊಡಗಿನಿಂದ ಗುತ್ತಿಗೆದಾರರು ಪಾಲ್ಗೊಳ್ಳುವುದಾಗಿ ತಿಳಿಸಿದರು.
ಕೊಡಗಿನ ಗುತ್ತಿಗೆದಾರರಿಗೆ ೧೯೫.೨೬ ಕೋಟಿ ಹಣ ಬರಲು ಬಾಕಿಯಿದೆ ಎಂದ ಅವರು, ಕೊಡಗಿನ ಲೋಕೋಪಯೋಗಿ ಇಲಾಖೆಯಲ್ಲಿ ಕೇವಲ ೭ ಇಂಜಿನಿಯರ್‌ಗಳಿದ್ದು, ಗುಣಮಟ್ಟದ ಕಾಮಗಾರಿ ನಡೆಯಬೇಕಾದರೆ ಹೆಚ್ಚಿನ ಇಂಜಿನಿಯರ್‌ಗಳನ್ನು ನೇಮಿಸುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ, ಉಪಾಧ್ಯಕ್ಷ ರಾಜೀವ್ ಲೋಚನ, ಕಾರ್ಯದರ್ಶಿ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಬಾಬು, ಖಜಾಂಚಿ ರವೀಂದ್ರ ರೈ, ಸುದ್ದಿಗೋಷ್ಠಿಯಲ್ಲಿದ್ದರು.







