ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ‘ಯುವ ಸಂಸತ್ತು’ ಕಾರ್ಯಕ್ರಮ – ಬಾಲ ಸಂಸದರ ಅಬ್ಬರದ ಚರ್ಚೆ, ಕೊಡಗಿನ ಸಮಸ್ಯೆಗಳಿಗೆ ಬೆಳಕು
ಜನವಾಹಿನಿ ನ್ಯೂಸ್ ಮಡಿಕೇರಿ : ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಮಡಿಕೇರಿಯ ಜಿ.ಪಂ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ‘ಯುವ ಸಂಸತ್ತು’ ಕಾರ್ಯಕ್ರಮ ಅತ್ಯಂತ ಮನೋಜ್ಞವಾಗಿ ನಡೆಯಿತು.
ಕೊಡಗಿನ ಸಮಸ್ಯೆಗಳ ಮೇಲೆಯೇ ಚರ್ಚೆ:
ಕೊಡಗಿನಲ್ಲಿ ಮಳೆ ಕೊರತೆಯಿಂದ ಕೃಷಿ ಹಿನ್ನಡೆ, ಮಾನವ-ವನ್ಯಜೀವಿ ಸಂಘರ್ಷ, ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಆರೋಗ್ಯ ಸೇವೆ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷದ ವಿದ್ಯಾರ್ಥಿಗಳ ನಡುವೆ ಜಿದ್ದಾಜಿದ್ದಿನ ಚರ್ಚೆ ನಡೆಯಿತು.
ಪ್ರೌಢಶಾಲೆ, ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಯ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಡಳಿತ ಮತ್ತು ಪ್ರತಿಪಕ್ಷದಲ್ಲಿ ಪಾಲ್ಗೊಂಡಿದ್ದರು.
ನಾಡಗೀತೆ, ವಂದೇಮಾತರಂ ಗೀತೆ ಹಾಗೂ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭಾಧ್ಯಕ್ಷರ ಪಾತ್ರವನ್ನು ಮುತ್ತಪ್ಪ ನಿರ್ವಹಿಸಿದರೆ, ಮುಖ್ಯಮಂತ್ರಿಯಾಗಿ ಪ್ರಭಾಕರ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಅಸ್ಮಿತಾ ಅವರು ಗಮನ ಸೆಳೆದರು.
ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ವಿಧೇಯಕ ಮಂಡನೆ, ಚರ್ಚೆ, ಅಂಗೀಕಾರ ಸೇರಿದಂತೆ ನಿಜವಾದ ವಿಧಾನಸಭೆಯ ಎಲ್ಲಾ ಕಾರ್ಯವಿಧಾನಗಳನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ ಕೆಡೆಟ್ಗಳು ಶಿಸ್ತು ಕಾಪಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ *ಮಂದ್ರೀರ ಮೋಹನ್ ದಾಸ್* ಅವರು, “ಯುವ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಂವಿಧಾನದ ಅರಿವು ಮೂಡಿಸಲು ಸಹಕಾರಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ರಾದ ಶ್ರೀಧರ, ತಾ.ಪಂ.ಇಒ ಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಿಲನ ಭರತ್, ನಿವೃತ್ತ ಪ್ರಾಂಶುಪಾಲರಾದ ಕೆ.ಜೆ.ದಿವಾಕರ, ವಿವಿಧ ಕಾಲೇಜಿನ ಪ್ರಾಂಶುಪಾಲರು, ಮುಖ್ಯೋಪಾಧ್ಯಯರು, ಅಧಿಕಾರಿಗಳು, ಶಿಕ್ಷಕರು ಇದ್ದರು








