Breaking News :

ಕೊಡಗಿನಿಂದ ಬಂದು ದೇಶಕ್ಕೆ ಪದಕ ತರಿಸಿದ ಕೋಚ್ – 19 ವರ್ಷ ನೆಲದ ಮೇಲೆ ತೆವಳಿದ ಹುಡುಗಿ, ಇಂದು ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತೆ..!

 


ಜನವಾಹಿನಿ ನ್ಯೂಸ್ ಮಡಿಕೇರಿ : ಹೌದು, ಈಗ ತಾನೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪ್ಯಾರಾ ವೀಲ್ ಚೇರ್ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಕಂಚಿನ ಪದಕವನ್ನು ತಂದಿರೋ ಕರ್ನಾಟಕದ ಮಗಳು ಪಲ್ಲವಿ ಚಳ್ಳಕೆರೆಯ ಸಾಧನೆಯ ಹಿಂದೆ ಕೊಡಗಿನ ಯುವಕನ ಪರಿಶ್ರಮ ಕೂಡ ಇದೆ ಎಂಬುವುದು ಹೆಮ್ಮೆಯ ಸಂಗತಿ.

ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುಳವೇಲಿ ಗ್ರಾಮದ ಕಾಲುವೆಹಳ್ಳಿಯ ಮಂಜುನಾಥ ಕೆ.ವಿ ಹಾಗೂ ಶಾಂತಾ ಟಿ. ದಂಪತಿಗಳ ಪುತ್ರಿ ಪಲ್ಲವಿ. ತನ್ನ 3ನೇ ವಯಸ್ಸಿನಲ್ಲಿ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ಬೆನ್ನುಹುರಿಗೆ ಪೆಟ್ಟಾಗಿ, 19 ವರ್ಷಗಳ ಕಾಲ ಗಾಲಿಕುರ್ಚಿ ಇಲ್ಲದೆ ನೆಲದ ಮೇಲೆ ತೆವಳಿಕೊಂಡು ಬದುಕಿದ ಆ ಹುಡುಗಿ, ಇಂದು ವಿಶ್ವದ ಟಾಪ್ 11 ಆಟಗಾರ್ತಿಗಳಲ್ಲಿ ಒಬ್ಬಳಾಗಿ ಬೆಳೆದಿದ್ದಾಳೆ.

ಆದರೆ ಇವರ ಈ ಐತಿಹಾಸಿಕ ಸಾಧನೆ ಹಿಂದೆ ಕೊಡಗು ಮೂಲದ ಯುವ ಬ್ಯಾಡ್ಮಿಂಟನ್ ತರಬೇತುದಾರ ವಿನಾಯಕ್ ರವರ ಮಾರ್ಗದರ್ಶನದ ಶ್ರಮ ಕೂಡ ಇದೆ ಎಂಬುವುದನ್ನು ನಾವಿಲ್ಲಿ ಸ್ಮರಿಸಲೇಬೇಕು.

ಪಲ್ಲವಿ ಬದುಕಿಗೆ ಸಿಕ್ಕ ತಿರುವು:

APD ಪುನರ್ವಸತಿ ಕೇಂದ್ರ ಅವರ ಬದುಕಿಗೆ ತಿರುವು ನೀಡಿತು. ಅಲ್ಲಿ ಫ್ಯಾಷನ್ ಡಿಸೈನಿಂಗ್ ಕಲಿತು, ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಲೇ, ಬ್ಯಾಡ್ಮಿಂಟನ್ ಅನ್ನು ಗಂಭೀರವಾಗಿ ತೆಗೆದುಕೊಂಡರು. ಆರಂಭದಲ್ಲಿ ಮೈಸೂರಿನ ತರಬೇತುದಾರ ಆನಂದ್ ಅವರಿಂದ ಮಾರ್ಗದರ್ಶನ ಪಡೆದ ಪಲ್ಲವಿ, ಪ್ರಸ್ತುತ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರಿಗೆ ಇದೀಗ Olympic Gold Quest (OGQ) ಸಂಸ್ಥೆ ಬೆಂಬಲ ನೀಡುತ್ತಿದೆ.

ಐತಿಹಾಸಿಕ ಸಾಧನೆ – 44 ಪದಕಗಳ ಒಡತಿಯಾಗಿರೋ ಪಲ್ಲವಿ, 28 ಅಂತರರಾಷ್ಟ್ರೀಯ. ಪದಕ ,11 ರಾಷ್ಟ್ರೀಯ ಪದಕ ಜತೆಗೆ ರಾಜ್ಯ ಮಟ್ಟದ 3 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ .

ಈ ಹೋರಾಟಗಾರ್ತಿಯ ಮುಂದಿನ ಗುರಿ 2028ರ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಮೂಲಕ ಭಾರತಾಂಬೆಯ ಕೀರ್ತಿಯನ್ನು ವಿಶ್ವಕ್ಕೆ ಸಾರುವುದು.

“ನನ್ನ ಪಯಣ ಹೋರಾಟದಿಂದ ಶುರುವಾಯಿತು. ಅಂಗವೈಕಲ್ಯ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಅಂಗವೈಕಲ್ಯ ಅನ್ನೋದು ಅಂಗಕ್ಕೆ ಹೊರತು ಮನಸ್ಸಿಗೋ ಅಥವಾ ಛಲಕ್ಕೋ ಅಲ್ಲ. ಆತ್ಮವಿಶ್ವಾಸ ಇದ್ದರೆ ನಾವು ಅಂದುಕೊಂಡದ್ದನ್ನು ಸಾಧಿಸಬಹುದು. ನನ್ನ ಮುಂದಿನ ಗುರಿ 2028ರ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು. ಉತ್ತಮ ಮಾರ್ಗದರ್ಶಕರು ನನ್ನ ಜೊತೆಗಿರುವುದು ನನ್ನ ಆತ್ಮ ಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.”

– ಪಲ್ಲವಿ ಕೆ.ಎಂ, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ

ಯಾರು ಈ ವಿನಾಯಕ..? ಕೊಡಗಿನಿಂದ ಬಂದು ದೇಶಕ್ಕೆ ಪದಕ ತರಿಸಿದ ಕೋಚ್!

ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಇಂಜಲಗೆರೆ ವ್ಯಾಪ್ತಿಯ ವಿನಾಯಕ ಪಿ. ವಿ. ಅವರು ಕೊಡಗಿನ ಹೆಮ್ಮೆಯ ಯುವ ಸಾಧಕ. ತಂದೆ ವಿಜಯನ್ ಪಿ. ಎ., ತಾಯಿ ಉಷಾ ಎಂ. ವಿ., ಸಹೋದರಿ ವಿದ್ಯಾ ಪಿ. ವಿ.

ವಿನಾಯಕ್ ಅವರು ತಮ್ಮ ವೃತ್ತಿಪರ ಬ್ಯಾಡ್ಮಿಂಟನ್ ವೃತ್ತಿಜೀವನವನ್ನು 2013 ರಲ್ಲಿ ಪ್ರಾರಂಭಿಸಿ, ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಆದರೆ 2020 ರಲ್ಲಿ ಆದ ಗಂಭೀರ ಗಾಯ ಅವರ ಆಟದ ಬದುಕಿಗೆ ಬ್ರೇಕ್ ಹಾಕಿತು.

ಗಾಯಗೊಂಡಾಗ ಮೂಲೆ ಸೇರದೆ, ಅವರು 2018 ರಿಂದಲೇ ತರಬೇತುದಾರರಾಗಿ ಬದಲಾದರು. ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರಿಗೆ ತರಬೇತಿ ನೀಡಿದ ಅನುಭವ ಅವರಿಗಿದೆ.

2023 ರಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಕಡೆ ಆಸಕ್ತಿ ಬೆಳೆಸಿಕೊಂಡ ಅವರು, ಪ್ಯಾರಾ ಕ್ರೀಡಾಪಟುಗಳ ದೈಹಿಕ ಸ್ಥಿತಿ, ಗಾಲಿಕುರ್ಚಿ ಚಲನೆ, ಅವರ ಮಿತಿಗಳನ್ನು ಅರ್ಥಮಾಡಿಕೊಂಡು ವಿಶೇಷ ತರಬೇತಿ ನೀಡಲು ಶುರು ಮಾಡಿದರು. ಪ್ಯಾರಾ-ಬ್ಯಾಡ್ಮಿಂಟನ್‌ನಲ್ಲಿ ಪ್ರಮಾಣೀಕರಣ (Certification) ಕೂಡ ಪಡೆದಿದ್ದಾರೆ.

2026ರ ಜನವರಿಯಲ್ಲಿ ತಮ್ಮದೇ ಆದ ವಿನಾಯಕ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ (VPBA) ಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಕಳೆದ 3 ವರ್ಷಗಳಿಂದ ಪಲ್ಲವಿ ಅವರಿಗೆ ಮಾರ್ಗದರ್ಶನ ನೀಡುತ್ತಿರುವುದು ಇವರೇ. ಇಂದು VPBA ಮೂಲಕ ಅವರ ಶಿಷ್ಯರು 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.

“ಅಂಗವಿಕಲರು ಅಂದ ಕೂಡಲೇ ಎಲ್ಲವೂ ಮುಗಿಯಿತು ಅಂತ ಮೂಲೆ ಸೇರಬಾರದು. ಛಲ ಮತ್ತು ಆತ್ಮವಿಶ್ವಾಸ ಇದ್ದರೆ ಸಾಧನೆ ನಿಮ್ಮನ್ನು ಹುಡುಕಿ ಬರುತ್ತೆ. ಪ್ಯಾರಾ ಕ್ರೀಡೆಯಲ್ಲಿ ಹಲವು ಅವಕಾಶಗಳಿವೆ. ಬ್ಯಾಡ್ಮಿಂಟನ್ ಮಾತ್ರವಲ್ಲ ಮತ್ತಷ್ಟು ಕ್ರೀಡೆಗಳಿದೆ, ಅದನ್ನು ಆಯ್ಕೆ ಮಾಡಿಕೊಂಡು ಸೂಕ್ತ ತರಬೇತಿ ಪಡೆದುಕೊಂಡರೆ ಮುಂದೆ ನೀವು ಕೂಡ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬಹುದು.”

– ವಿನಾಯಕ, ಮುಖ್ಯ ತರಬೇತಿದಾರ, VPBA

Share this article

ಟಾಪ್ ನ್ಯೂಸ್

More News